Untitled Document
Sign Up | Login    
ಜೇನು ಗೂಡಿನ ಹೊದರು ( Part )

ಮುಂಜಾನೆಯ ಏಳು ಘಂಟೆ, ಆಶ್ರಮದ ಎಲ್ಲ ಜನರೂ ಅವರವರ ಕೆಲಸದಲ್ಲಿ ತಲ್ಲೀನರಾಗಿದ್ದರು. ಸೈಕಲ್ ಬೆಲ್ಲು ಮಾಡಿ, ಪೇಪರ್ ಹುಡುಗ ಒಗೆದು ಹೋದ ’ಸಂತ ವಿಕ್ರಮ’ ದಿನಪತ್ರಿಕೆಯನ್ನು ಎತ್ತಿಕೊಂಡು, ಸ್ವಾಮಿ ಚಿದಂಬರೇಶ ಆಶ್ರಮದ ಹೊರ ಭಾಗದಲ್ಲಿ ಕಲ್ಲುಬೆಂಚಿನ ಮೇಲೆ ಕುಳಿತು ಪ್ರಮುಖ ಸುದ್ದಿಗಳ ಮೇಲೆ ಕಣ್ಣಾಡಿಸತೊಡಗಿದರು. ಪತ್ರಿಕೆಯ ತುಂಬ ಭ್ರಷ್ಟಾಚಾರ ವಿರೋಧೀ ಆಂದೋಲನದ ಸುದ್ದಿಯೇ ತುಂಬಿಕೊಂಡಿತ್ತು. ಪ್ರಜಾಸೇವಾದ ಕಾನಿಟಕರ್ ಗುಂಪು ಹಾಗೂ ತಮ್ಮ ಫೋಟೋ ಫ್ರಂಟ್ ಪೇಜಿನಲ್ಲಿ ರಾರಾಜಿತ್ತಿರುವುದನ್ನು ಕಂಡು ಚಿದಂಬರೇಶರಿಗೆ ಹರ್ಷವಾಯಿತು. ತಮ್ಮ ಆಂದೋಲನಕ್ಕೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತ ಉತ್ಸಾಹದಿಂದ ಓದುತ್ತ ಹೋದರು.

'ಆಂದೋಲನ ಹೊಯಿಲು ನೀರಾದರೆ ನಿಲ್ಲದು ಯಶಸ್ಸು ಕಾಣದು. ಅದು ಪ್ರಜೆಗಳ ಎದೆಯಾಳಕ್ಕೆ ಇಳಿಯಬೇಕು. ತಲ ಮಟ್ಟದಿಂದ ಮೇಲೆದ್ದು ಬರುವ ಅಕ್ಷಯ ಒರತೆಯಾಗಬೇಕು. ಅಲ್ಲದೇ ಯಾವುದೇ ರಾಜಕೀಯ ಪಕ್ಷದ ಅಥವಾ ಇಸಮ್ಮಿನ ಪರಿಧಿಯಿಂದ ಹೊರ ಬಂದಿರಬೇಕು, ಅಪ್ಪಟ ಜನಪರ ಕಾಳಜಿಯ ನೆಲೆಗಟ್ಟಿನ ಮೇಲೆ ನಿಂತಿರಬೇಕು. ಅಂದರೆ ಮಾತ್ರ ಅದು ಗೆಲ್ಲುತ್ತದೆ. ಮೊದ ಮೊದಲು ಸೋಲಾಯಿತೆಂದೆನಿಸಿದರೂ, ವ್ಯಕ್ತಿ ತೆರೆಗೆ ಸರಿದರೂ ಶಕ್ತಿ ನಾಶವಾಗದು. ಮತ್ತೆ ಚಿಗಿತು ದಾಂಗುಡಿಯಿಡುತ್ತ ನಿರೀಕ್ಷಿತ ಅಮೃತ ಫಲವನ್ನು ನೀಡುತ್ತದೆ'.

ಪತ್ರಿಕೆಯ ಒಳಪುಟದಲ್ಲಿ ಉದ್ಧರಿಸಲಾದ ಮಹಾತ್ಮರೊಬ್ಬರ ಈ ಮಾತುಗಳಿಂದ ಅಕರ್ಷಿತರಾದ ಸ್ವಾಮಿ ಚಿದಂಬರೇಶ ಅವುಗಳನ್ನು ನೋಟ್ ಮಾಡಿಕೊಂಡರು. ಅಷ್ಟರಲ್ಲಿ ಎದುರಿನ ಗೇಟಿನ ಬಳಿ ಕೆಂಪು ಬಣ್ಣದ ಅಸೆಂಟ ಕಾರೊಂದು ಬಂದು ನಿಂತಿತು. ಅದರಿಂದ ನಾಲ್ಕು ಜನ ಅಪರಿಚತರು ಕಣ್ಣು ಮಾತ್ರ ಕಾಣುವಂತಿದ್ದ ಮುಸುಕು ಧಾರಿಗಳು ಬಡ ಬಡ ಇಳಿದರು. ಸೀದಾ ಸ್ವಾಮಿ ಚಿದಂಬರೇಶ ಬಳಿ ಬಂದು, 'ಚಿದಂಬರೇಶ ನೀವೇ ಅಲ್ಲವೆ?' ಎಂದು ಕೇಳಿದರು. ಒಮ್ಮೆಲೆ ಗಾಬರಿಗೊಂಡ ಚಿದಂಬರೇಶ, 'ಹೌದು, ಯಾರು ನೀವು?' ಎನ್ನುತ್ತಿದ್ದಂತೆ ಅವರನ್ನು ಅನಾಮತ್ತಾಗಿ ಹೊತ್ತುಕೊಂಡು ಹೋಗಿ ಕಾರಲ್ಲಿ ಹಾಕಿಕೊಂಡು, ಬಂದ ದಿಕ್ಕಿನಕಡೆಗೇ ಕಾರುತಿರುಗಿಸಿ ವೇಗವಾಗಿ ಹೊರಟರು. ಚಿದಂಬರೇಶ ಕೂಗಲು ಬಾಯಿತೆರೆಯುತ್ತಿದ್ದಂತೆಯೇ ಧಡೂತಿಯೊಬ್ಬ ಕೂಗಾಟಮಾಡಿದರೆ ಕೊಂದುಬಿಡುವುದಾಗಿ ಪಿಸ್ತೂಲು ಮುಂದೆ ಹಿಡಿದ.

ಆಶ್ರಮಕ್ಕೆ ಪೋನ್ ಮಾಡಿ ’ನಾನು ಅರ್ಜೆಂಟ್ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದೇನೆ. ಸ್ವಲ್ಪ ಹೊತ್ತಿನಲ್ಲಿಯೇ ಮರಳುತ್ತೇನೆ. ಗಾಬರಿಯಾಗಬೇಡಿ, ಎಂದು ತಿಳಿಸಿ’ ಎಂದ. ಸ್ವಾಮಿ ಚಿದಂಬರೇಶ ಅದರಂತೆ ಆಶ್ರಮಕ್ಕೆ ಪೋನ್ ಮಾಡಿ ತಿಳಿಸಿದರು. ಸುಮಾರು ಎರಡು ತಾಸು ಕಾರು ಸಾಗಿದ ಮೇಲೆ ಅರಮನೆಯಂತಹ ಬಂಗಲೆಯೊಂದರ ಮುಂದೆ ಕಾರು ನಿಂತಿತು. ಕಾರಿನ ಬಾಗಿಲು ತೆರೆಯುವ ಮುನ್ನ ಸ್ವಾಮಿ ಚಿದಂಬರೇಶರ ಕಣ್ಣಿಗೆ ಬಟ್ಟೆ ಕಟ್ಟಿದರು. ಇಬ್ಬರು ಧಡಿಯರು ಎರಡೂ ಕೈಹಿಡಿದು ಅರ್ಧ ಘಂಟೆ ನಡೆಸುತ್ತ ಕೊಠಡಿಯೊಂದರ ಬಳಿ ಕರೆ ತಂದು ಕಣ್ಣಿನ ಬಟ್ಟೆಯನ್ನು ಬಿಚ್ಚಿದರು. ಅದೊಂದು ರಹಸ್ಯ ಕೋಣೆ. ಸಿಂಹಾಸನದಂಥ ತಿರುಗು ಖುರ್ಚಿಯಲ್ಲಿ ಗಡಸು ಮುಖದ ಭೀಮಕಾಯದ ವ್ಯಕ್ತಿಯೊಭ್ಬ ಆಸೀನನಾಗಿದ್ದ. ಚಿದಂಬರೇಶರಿಗೆ ಕೂರುವಂತೆ ಕೈತೋರಿಸಿದ. ಕುಳಿತ ಮೇಲೆ ಗೊಗ್ಗರು ದನಿಯಲ್ಲಿ ಕೇಳಿದ, ’ಏನು, ಕಾಳ ಧನ ಮತ್ತು ಸ್ವಿಸ್ ಬ್ಯಾಂಕ್ ಡೆಪಾಸಿಟ್ ವಾಪಸಾತಿಗೆ ಹೋರಾಟ ಮಾಡ್ತೀರಂತೆ..?' ’ಹೌದು, ಸ್ವಿಸ್ ಬ್ಯಾಂಕಿನಲ್ಲಿಟ್ಟ ಕಾಳಧನವನ್ನು ವಾಪಸ್ ತಂದರೆ ನಮ್ಮ ದೇಶದಲ್ಲಿ ಯಾರೂ ಬಡವರೇ ಇರೊಲ್ಲ. ಬಡತನ, ಹಣಕಾಸಿನ ತೊಂದರೆ ಅನ್ನುವ ಪ್ರಶ್ನೆಯೇ ಇರೊಲ್ಲ..ಕೋಟಿ ಕೋಟಿ ಬಡವರಿಗೆ, ಶೋಷಿತರಿಗೆ ಅನುಕೂಲ ಆಗುತ್ತದೆಂದು ನಮ್ಮ ಭಾವನೆ'.

’ಅದು ಸಾಧ್ಯವಿಲ್ಲ, ನಿಮ್ಮ ಯೋಚನೆ ಅಸಂಭವ, ಅಸಾಧು. ನೀವು ಅದನ್ನು ಕೈಬಿಟ್ಟರೆ..ನಿಮಗೇ ಕ್ಷೇಮ..'
’ಅದು ಹೇಗೆ ಸಾಧ್ಯವಾಗುತ್ತದೆ? ಪ್ರಜಾಸೇವಾದ ಜೊತೆ ನಾವು ಕೈಜೋಡಿಸಿದ್ದೇವೆ'. ’ನೀವು ಯಾರ ಜೊತೆ ಬೇಕಾದರೂ ಕೈಜೋಡಿಸಿರಿ, ನೀವು ಇದರಿಂದ ಹಿಂದೆ ಸರಿಯಬೇಕು, ಅದಕ್ಕಾಗಿ ನಿಮಗೆ ಆಶ್ರಮದ ಅಭಿವೃದ್ಧಿಗಾಗಿ 25 ಕೋಟಿ ರೂಪಾಯಿ ಕೊಡಲಾಗುವುದು. ಅದಿಲ್ಲ, ನಾವು ಪ್ರಜಾಸೇವಾದ ಜೊತೆ ಹೋಗುತ್ತೇವೆ ಎಂದರೆ ನಿಮ್ಮನ್ನೂ ನಿಮ್ಮ ಆಶ್ರಮವನ್ನೂ ಅಲ್ಲಿರುವ ಜನ, ವಸ್ತು ಸಹಿತ ಬಾಂಬಿಟ್ಟು ಉಡಾಯಿಸಲಾಗುವುದು.. ಯೋಚಿಸಿ..' ’ಅಂದರೆ.. ನೀವೇಕೆ ಹೀಗೆ ಮಾಡುತ್ತೀರಿ? ನಿಮಗೇನು ತೊಂದರೆ ? ನಾವು ಅವರ ಜೊತೆ ಹೋಗಲೇಬೇಕು..’

'ನೀವು ಹಾಗೂ ನಿಮ್ಮಿಂದಾಗಿ ಅನೇಕ ಜನ ಪ್ರಾಣ ಕಳೆದುಕೊಳ್ಳಬೇಕೆಂದು ನಿವು ಯೋಚಿಸುತ್ತೀರ? ನಿಮಗೆ ಒಂದು ದಿನ ಕಾಲಾವಕಾಶ. ನಿರ್ಣಯ ನಿಮಗೆ ಬಿಟ್ಟದ್ದು. ನಿಮ್ಮ ಮುಂದೆ ಎರಡೇ ಆಯ್ಕೆ ಇದೆ; ಒಂದು ನ್ಯೂಟ್ರಲ್ ಅಗಿ ಆಶ್ರಮ ಅಭಿವೃದ್ಧಿ ಪಡಿಸುವುದು..ಎರಡು ಎಲ್ಲರೂ ಪ್ರಾಣ ಕಳೆದುಕೊಳ್ಳುವುದು..' ಎಂದು ನುಡಿದು ಆತ ಹ್ಹ, ಹ್ಹ, ಹ್ಹ,ಎಂದು ಗಹಗಹಿಸಿ ನಕ್ಕ.

ಸ್ವಾಮಿ ಚಿದಂಬರೇಶ ಮೌನವಾದರು. ನೂರಾರು ಆಶ್ರಮವಾಸಿಗಳನ್ನೂ ಆಶ್ರಮವನ್ನೂ ಬಲಿಗೊಡಬೇಕೆ? ಆಥವಾ ತಟಸ್ಥ ಉಳಿದು ಅವರು ನೀಡಿದ ಹಣದಿಂದ ಅಂತರಾಷ್ಟ್ರಿಯ ಖ್ಯಾತಿಯ ಆಶ್ರಮವನ್ನಾಗಿ ಅಭಿವೃದ್ಧಿಪಡಿಸಬೇಕೆ? ಎಂಬ ದ್ವಂದ್ವ ಅವರನ್ನು ಕಾಡತೊಡಗಿತು..

’ಆಯಿತು ಒಂದು ದಿನ ಬಿಟ್ಟು ತಿಳಿಸುತ್ತೇನೆ..' ಎಂದು ಎದ್ದರು. ಅವರ ಮುಖ ಮ್ಲಾನವಾಗಿತ್ತು. ’ನಾಳೆ ಸರಿಯಾಗಿ ಸಂಜೆ ಏಳುಘಂಟೆಗೆ ರಿಂಗ್ ಮಾಡಲಾಗುತ್ತೆ.’

ಸ್ವಾಮಿ ಚಿದಂಬರೇಶ ತಲೆ ಅಲ್ಲಾಡಿಸಿದರು. ಮರುಕ್ಷಣದಲ್ಲಿಯೇ ಇಬ್ಬರು ಧಾಂಡಿಗರು ಬಂದು ಅವರ ಕಣ್ಣಿಗೆ ಮತ್ತೆ ಬಟ್ಟೆ ಕಟ್ಟಿ, ಎರಡೂ ಬದಿಯಲ್ಲಿ ಅವರನ್ನು ಹಿಡಿದುಕೊಂಡು ಕಾರಿನ ಬಳಿ ಕರೆತಂದು, ಒಳಗೆ ಕೂರಿಸಿ ಕಣ್ಣಿನ ಬಟ್ಟೆ ಬಿಚ್ಚಿದರು. ಕಾರು ಆಶ್ರಮದತ್ತ ಹೊರಟಿತು. ಚಿದಂಬರೇಶ ನಿರ್ಣಯ ಮಾಡಲು ಮರುದಿನದ ವರೆಗೆ ಕಾಯಲಿಲ್ಲ; ಒಂದು ದೀರ್ಘ ನಿಟ್ಟುಸಿರು ಬಿಟ್ಟು ಮನಸ್ಸಿನಲ್ಲಿಯೇ ಅಂದುಕೊಂಡರು ’ನೂರಾರು ಜನ ಅಮಾಯಕರನ್ನೂ, ಆಶ್ರಮದ ಕನಸನ್ನೂ ಬಲಿಕೊಡುವುದರಲ್ಲಿ ಅರ್ಥವಿಲ್ಲ..’

ಮುಂದುವರಿಯುವುದು..

Name : ವನರಾಗ ವನರಾಗ
Mobile no : -
Write Comments
*Name :
*Comment :
(Max.1000 Characters)
  
The Ultimate Job Portal

Other Episodes

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited